ಜೀವನದಲ್ಲಿ ಆತ್ಮ ತೃಪ್ತಿ ಮುಖ್ಯ. ವಿದ್ಯಾರ್ಥಿಗಳು ತಮ್ಮ ಬಗ್ಗೆ ತಾವು ಹೆಮ್ಮೆ ಪಡುವಂತೆ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಕರಾವಳಿಕಾಲೇಜುಗಳ ಸಮೂಹದ ಆಡಳಿತ ಮಂಡಳಿ ಜಿ.ಆರ್. ಎಜ್ಯುಕೇಶನ್ ಟ್ರಸ್ಟ್(ರಿ)ನ ಸ್ಥಾಪಕಾಧ್ಯಕ್ಷರಾದ ಶ್ರೀ ಎಸ್. ಗಣೇಶ್ ರಾವ್ ಇವರು ನಗರದ ನೀರು ಮಾರ್ಗದಲ್ಲಿರುವ ಕರಾವಳಿಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ‌ನಲ್ಲಿ ಆಯೋಜಿಸಲಾದ ಕರಾವಳಿಕಾಲೇಜುಗಳ ಸಮೂಹದ “ಪದವಿ ಪ್ರಧಾನ” ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಅವರು ಮುಂದುವರಿದು, ಭವಿಷ್ಯದ ಕನಸನ್ನು ಕಂಡು ಸಾಕಾರಗೊಳಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆ ಇಡಬೇಕು. ಈ ಸಂದರ್ಭದಲ್ಲಿ ವಿಫಲತೆ ಎದುರಾದರೆ ಎದೆಗುಂದದೆ ಮುನ್ನಡೆಯಬೇಕು ಹಾಗೂ ಸಾಧಕರಿಂದ ಸ್ಪೂರ್ತಿಯನ್ನು ಪಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಈ ಶಿಕ್ಷಣ ಸಂಸ್ಥೆ ಕೇವಲ ಪಠ್ಯ ಮಾತ್ರವಲ್ಲ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪ್ರಾಮುಖ್ಯತೆ ನೀಡುತ್ತಿದೆ, ಯಾವುದೇ ಭೇದಭಾವ ಇಲ್ಲದೆ ವಿದ್ಯಾರ್ಥಿಗಳ ಅಭಿವೃದ್ದಿಗೆ ಪೂರಕವಾದ ವಾತಾವರಣವನ್ನು ಕಲ್ಪಿಸುತ್ತಿದೆ ಎಂದರು.

ಅದಾನಿ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಅಧ್ಯಕ್ಷರಾದ ಶ್ರೀ. ಕಿಶೋರ್ ಆಳ್ವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಆತ್ಮ ವಿಶ್ವಾಸ ರೂಢಿಸಿಕೊಳ್ಳುವುದರ ಜೊತೆಗೆ ಹೆತ್ತವರನ್ನು ಹಾಗೂ ಶಿಕ್ಷಕರನ್ನು ಗೌರವಿಸಬೇಕು, ಈ ಮೂಲಕ ಜೀವನದಲ್ಲಿಯ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ. ಈ ವಿದ್ಯಾಸಂಸ್ಥೆ ಮಂಗಳೂರು ವಿದ್ಯಾಕೇಂದ್ರವಾಗಿ ಪ್ರಗತಿಯನ್ನು ಕಂಡಿದ್ದು, ನಗರದಹೊರ ವಲಯ ನೀರು ಮಾರ್ಗದಲ್ಲಿ ವೈದ್ಯಕೀಯ, ಎಂಜಿನಿಯರಿಂಗ್ ಮುಂತಾದ ಸಂಸ್ಥೆಗಳನ್ನು ಸ್ಥಾಪಿಸಿ ಈ ಪ್ರದೇಶದ ಅಭಿವೃದ್ಧಿಗೆ ಕೊಡುಗೆಯನ್ನು ನೀಡುತ್ತಿದೆ ಎಂದು ಶ್ಲಾಘನೀಯವಾಗಿದೆ. ನಾವು ಕಂಡಿರುವ ಕನಸನ್ನು ಈಡೇರಿಸಲು ಶ್ರಮಿಸಬೇಕು, ಜೀವನದಲ್ಲಿ ಬರುವ ಸವಾಲನ್ನು ಎದುರಿಸಿ ಯಶಸ್ವಿಯಾಗಬೇಕು ಎಂದರು.

ಕರಾವಳಿ ಕಾಲೇಜುಗಳ ಸಮೂಹದ ನಿರ್ದೇಶಕಿ ಶ್ರೀಮತಿ ಲತಾ ಜಿ. ರಾವ್ ಅವರು ಕಾರ್ಯಕ್ರಮದಲ್ಲಿ ಪ್ರಮುಖ ಅತಿಥಿಯಾಗಿ ಭಾಗವಹಿಸಿದರು. ಕಾರ್ಯಕ್ರಮವು ಗಣ್ಯರು ಮತ್ತು ಪದವಿ ಪಡೆದ ವಿದ್ಯಾರ್ಥಿಗಳೊಂದಿಗೆ ಆಕರ್ಷಕ ಪಥಸಂಚಲನವು ಬ್ಯಾಂಡ್ ವಾದ್ಯಗಳ ಮೂಲಕ ಪ್ರಾರಂಭವಾಯಿತು. ತದನಂತರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು.

ಕಾರ್ಯಕ್ರಮದಲ್ಲಿ, ಕರಾವಳಿಯ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ರಘುಚಂದ್, ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಐ. ದೇವಿ ಪ್ರಸಾದ್ ಶೆಟ್ಟಿ, ಕರಾವಳಿಯ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರವಿ ಕುಮಾರ್, ಕರಾವಳಿಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಭಾಗೀರಥಿ ಮತ್ತು ಶೈಕ್ಷಣಿಕ ಸಲಹೆಗಾರರಾದ ಡಾ. ರಾಜೇಂದ್ರ ಪ್ರಸಾದ್ ಮತ್ತು ಆಡಳಿತ ಅಧಿಕಾರಿ ಪ್ರೊ. ಝೀಶಾನ್ ಎನ್. ಎಸ್. ಇ ಮುಂತಾದವರು ಉಪಸ್ಥಿತರಿದ್ದರು. ಕು. ಹೃತಿಕಾ ಸ್ವಾಗತಿಸಿದರು, ಶ್ರೀಮತಿ ಭವಿಷ್ಯ ಎಂ. ಆರ್. ಪ್ರಾರ್ಥಿಸಿದರು, ಕು. ಹೆಜಿಟಾ ಸ್ಮಿತಾ ಲೋಬೋ ಮುಖ್ಯ ಅತಿಥಿಯವರನ್ನು ಪರಿಚಯಿಸಿದರು. ಕು. ಮೆಹರಾಜ್ ಗನಿ ನಿರೂಪಿಸಿದರು, ಕು. ಐಶ್ವರ್ಯ ಹೊಯ್ಸಳ ವಂದಿಸಿದರು.