ಕಸ್ತೂರಿರಂಗನ್ ವರದಿಯಲ್ಲಿ ಉಲ್ಲೇಖಿಸಲಾದ ಬೆಳ್ತಂಗಡಿ, ಕಡಬ, ಸುಳ್ಯ ತಾಲೂಕಿನ ೪೮ ಗ್ರಾಮಗಳ ಜನರು ಜಾತ್ಯಾತೀತ, ಪಕ್ಷಾತೀತ, ಕಾನೂನಾತ್ಮಕ ಮತ್ತು ವಿಷಯಾಧಾರಿತ ನಿಲುವುಗಳನ್ನು ಹೊಂದಿಕೊಂಡು ವರದಿಯ ವಿರುದ್ದ ನ. ೧೫ ರಂದು ಸುಬ್ರಹ್ಮಣ್ಯ ಸಮೀಪದ ಗುಂಡ್ಯದ ಮಾಡದ ವಠಾರದಲ್ಲಿ ಶಾಶ್ವತ ಪರಿಹಾರಕ್ಕಾಗಿ ಈ ಪ್ರತಿಭಟನಾ ಸಭೆ ನಡೆಯಲಿದೆ. ಈ ಪ್ರತಿಭಟನೆಗೆ ಸುಮಾರು ೧೫ಸಾವಿರ ಮಂದಿ ಸೇರುವ ನಿರೀಕ್ಷೆಯಿದೆ ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿಯವರ ಹೇಳಿದರು.
ಅವರು ಕಡಬದಲ್ಲಿ ಪತ್ರೀಕಾಗೋಷ್ಟಿಯಲ್ಲಿ ಮಾತನಾಡಿ, ಪ್ರತಿಭಟನೆಯ ರೂಪುರೇಷೆಗಳನ್ನು ಸಿದ್ದಪಡಿಸಲಾಗಿದ್ದು ಪ್ರತಿಭಟನಾ ಸಭೆಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಅರಣ್ಯಾಧಿಕಾರಿ ಬಂದು ಮನವಿ ಸ್ವೀಕರಿಸದಿದ್ದರೆ, ಪ್ರತಿಭಟನೆಯ ಸ್ವರೂಪ ಬದಲಾಗಲಿದ್ದು ರಸ್ತೆ ತಡೆ ಮಾಡಲಾಗುವುದು . ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನ ಮಾಡುವಲ್ಲಿ ಅಧಿಕಾರಿಗಳು ಉತ್ಸುಕರಾಗಿದ್ದಾರೆ ಯಾಕೆಂದರೆ ಇದೊಂದು ಹಣ ಮಾಡುವ ದಂದೆಯಾಗಿ ಪರಿವರ್ತನೆಯಾಗಲಿದೆ. ಹೀಗಾಗಿ ವರದಿ ಅನುಷ್ಠಾನ ಮಾಡಬಾರದೆಂದು ಇದುವರೆಗೆ ಕಡಬ, ಸುಳ್ಯ, ಬೆಳ್ತಂಗಡಿ ತಾಲೂಕಿನ ೪೮ ಗ್ರಾಮಗಳಿಗೆ ಸಂಬಂಧಪಟ್ಟ ಪಂಚಾಯತ್‌ಗಳಲ್ಲಿ ಪ್ರತಿಭಟನಾ ಸಭೆ ನಡೆಸಿ ಮನವಿ ಸಲ್ಲಿಸಲಾಗಿದೆ. ಕಸ್ತೂರಿ ರಂಗನ್ ವರದಿಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಪೂರ್ಣ ಕೈಬಿಡಬೇಕು. ಪಶ್ಚಿಮ ಘಟ್ಟ ಮತ್ತು ಜನವಸತಿ ಪ್ರದೇಶಕ್ಕೆ ಗಡಿ ಗುರುತು ಆಗಬೇಕು. ಕೃಷಿ ಭೂಮಿಗೂ ಅರಣ್ಯ ಭೂಮಿಯ ನಡುವೆ ಆನೆ ಕಂದಕ ನಿರ್ಮಾಣವಾಗಬೇಕು. ಪಶ್ಚಿಮಘಟ್ಟಕ್ಕೆ ಬರುವ ಅರಣ್ಯ ಸಂರಕ್ಷಣಾ ಕಾಯ್ದೆ ಕೃಷಿ ಭೂಮಿ, ಜನವಸತಿ ಪ್ರದೇಶ ಮತ್ತು ಮೂಲಭೂತ ಸೌಕರ್ಯಕ್ಕೆ ಅನ್ವಯಿಸಬಾರದು. ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಸರ್ವೆ ನಡೆಯಬೇಕು. ರೈತರಿಗೆ ಕೋವಿ ಪರವಾನಿಗೆ ನೀಡಬೇಕು. ಪಶ್ಚಿಮ ಘಟ್ಟಕ್ಕೆ ಸಂಬಂಧಪಟ್ಟಂತೆ ಪರಿಸರ ಸಂರಕ್ಷಣೆಯ ತಜ್ಞರ ವರದಿ ತಯಾರಿಸುವಾಗ ಪಶ್ಚಿಮ ಘಟ್ಟ ಪ್ರದೇಶದ ಗ್ರಾಮ ಪಂಚಾಯಿತಿಗಳಲ್ಲಿ ವ್ಯಾಪಕ ಪ್ರಚಾರ ನಡೆಸಿ ವಿಶೇಷ ಗ್ರಾಮ ಸಭೆ ಕರೆದು ಗ್ರಾಮಸ್ಥರ ಅಭಿಪ್ರಾಯವನ್ನು ಸಂಗ್ರಹಿಸಬೇಕು ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲಾಗುದು. ದ.ಕ ಮತ್ತು ಉಡುಪಿ ಸಂಸದರು, ಶಾಸಕರುಗಳು , ಸ್ಥಳಿಯಾಡಳಿತದ ಜನ ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮಲೆನಾಡು ಹಿತರಕ್ಷಣಾ ಸಮಿತಿ ಮುಖಂಡ ಸಯ್ಯದ್ ಮೀರಾ ಸಾಹೇಬ್ ಮಾತನಾಡಿ, ಈಗಾಗಲೇ ರಾಜ್ಯದ ಮುಖ್ಯಮಂತ್ರಿ, ಅರಣ್ಯ ಸಚಿವರಿಗೆ ಬೆಂಗಳೂರಿಗೆ ತೆರಳಿ ಮನವಿ ನೀಡಿ ಶಾಶ್ವತ ಪರಿಹಾರ ನೀಡುವಂತೆ ವಿನಂತಿಸಲಾಗಿದೆ ಎಂದರು.
ಪತ್ರೀಕಾಗೋಷ್ಟಿಯಲ್ಲಿ ಮಲೆನಾಡು ಹಿತರಕ್ಷಣಾ ಸಮಿತಿ ಪದಾಧಿಕಾರಿಗಳಾದ ಅಚ್ಯುತ ದೇರಾಜೆ, ಹರಿಪ್ರಸಾದ್ ಎನ್ಕಾಜೆ , ಚಂದ್ರಶೇಖರ ಕೋಡಿಬೈಲು ಇದ್ದರು.