ಅಮೆರಿಕಾ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ತಂಡ ಎಸ್ ಸಿಡಿಸಿಸಿ ಬ್ಯಾಂಕಿಗೆ ಭೇಟಿ

ಮಂಗಳೂರು

news-details

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನವೋದಯ ಸ್ವ ಸಹಾಯ ಗುಂಪುಗಳ ಕಾರ್ಯದಕ್ಷತೆ ಹಾಗೂ ಸಂಘಟನೆಯನ್ನು ಗುರುತಿಸಿಕೊಂಡು ಅಮೆರಿಕಾದ ಪ್ರತಿಷ್ಠಿತ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಅಧ್ಯಯನ ತಂಡ ಶನಿವಾರ ಎಸ್ ಸಿಡಿಸಿಸಿ ಬ್ಯಾಂಕಿಗೆ ಭೇಟಿ ನೀಡಿತು.


ಪೆನ್ಸಿಲ್ವೇನಿಯಾ ವಿವಿ ಪ್ರೊಫೆಸರ್ ಫೆಮಿಡಾ ಹ್ಯಾಂಡಿ ನೇತೃತ್ವದಲ್ಲಿ 10 ಮಂದಿಯ ತಂಡ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಸಭಾಂಗಣದಲ್ಲಿ ನವೋದಯ ಸ್ವಸಹಾಯ ಸಂಘಗಳ ಸಂಸ್ಥಾಪಕ ಮತ್ತು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರೊಂದಿಗೆ ವಿಚಾರ ವಿನಿಮಯ ನಡೆಸಿದರು.


ಎಸ್ ಸಿಡಿಸಿಸಿ ಬ್ಯಾಂಕ್ ಪ್ರಶಂಸನೀಯ.ಸಾಧನೆ: ಪೆನ್ಸಿಲ್ವೇನಿಯಾ ವಿವಿ ಪ್ರೊಫೆಸರ್ ಫೆಮಿಡಾ ಹ್ಯಾಂಡಿ ಈ ಸಂದರ್ಭ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಆರ್ಥಿಕ ಪರಿಸ್ಥಿತಿಯಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಮೋಘ ಸಾಧನೆ ಮಾಡಿರುವುದು ಪ್ರಶಂಸನೀಯ. ಇದರೊಂದಿಗೆ ಗ್ರಾಮೀಣ ಮಹಿಳೆಯರ ಏಳಿಗೆಗಾಗಿ ಹುಟ್ಟಿಕೊಂಡ ನವೋದಯ ಸ್ವಸಹಾಯ ಸಂಘಗಳ ಕಾರ್ಯವೈಖರಿ ಎಸ್ ಸಿಡಿಸಿಸಿ ಬ್ಯಾಂಕಿನ ಸಾಧನೆಯ ಶಿಖರಕ್ಕೆ ಪೂರಕವಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.


11ನೇ ಬಾರಿಗೆ ಅಮೇರಿಕಾ ತಂಡ ಭೇಟಿ : ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ , ಎಸ್‌ಸಿಡಿಸಿಸಿ ಬ್ಯಾಂಕ್ ಹಾಗೂ ನವೋದಯ ಸ್ವಸಹಾಯ ಗುಂಪುಗಳ ಕಾರ್ಯ ನಿರ್ವಹಣೆಯ ಬಗ್ಗೆ ತಂಡಕ್ಕೆ ಮಾಹಿತಿ ನೀಡಿದರು. ಬ್ಯಾಂಕ್ ಹಾಗೂ ನವೋದಯ ಸ್ವಸಹಾಯ ಗುಂಪುಗಳ ಕಾರ್ಯದಕ್ಷತೆ ದೇಶದಲ್ಲಿ ಗಮನಾರ್ಹ ಸಾಧನೆ ಮಾಡಿರುವುದರಿಂದಲೇ ಅಮೆರಿಕದ ಪೆನ್ಸಿಲ್ವೇನಿಯಾ ವಿವಿ ತಂಡ ವಿಶೇಷ ಅಧ್ಯಯನಕ್ಕಾಗಿ ಇಲ್ಲಿಗೆ ಆಗಮಿಸಿದೆ. ಪ್ರೊ .ಫೆಮಿಡಾ ಹ್ಯಾಂಡಿ ನೇತೃತ್ವದಲ್ಲಿ 11ನೇ ಬಾರಿಗೆ ಅಮೆರಿಕಾ ತಂಡ ಎಸ್ ಸಿಡಿಸಿಸಿ ಬ್ಯಾಂಕಿಗೆ ಭೇಟಿ ನೀಡುತ್ತಿರುವುದು ಉಲ್ಲೇಖನೀಯ ವಿಚಾರ. ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ನವೋದಯ ಸ್ವ ಸಹಾಯ ಸಂಘಗಳು ಸರ್ವ ವಿಧದಲ್ಲೂ ಮುನ್ನಡೆಯನ್ನು ಕಂಡು ಯಶಸ್ವಿ 24 ವರ್ಷಗಳನ್ನು ಪೂರೈಸಿ, ಇದೀಗ ರಜತ ಪರ್ವದಲ್ಲಿದೆ ಎಂದರು.


ನಿಟ್ಟೆ ವಿಶ್ವವಿದ್ಯಾಲಯದ ಪ್ರೊ ವಿನೋದ್ ದೀಕ್ಷಿತ್ ಅಧ್ಯಯನ ತಂಡವನ್ನು ಪರಿಚಯಿಸಿ , ಎಸ್ ಸಿಡಿಸಿಸಿ ಬ್ಯಾಂಕ್ ಪ್ರತಿ ಬಾರಿಯೂ ಅಧ್ಯಯನ ತಂಡ ಆಗಮಿಸಿದಾಗ ಉತ್ತಮವಾದ ಸಹಕಾರವನ್ನು ನೀಡುತ್ತಾ ಬಂದಿರುವುದನ್ನು ಸ್ಮರಿಸಿದರು. ಎಸ್ ಸಿಡಿಸಿಸಿ ಬ್ಯಾಂಕ್ ಡಾ.ಎಂ.ಎನ್.ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ತನ್ನ ಕಾರ್ಯಸಾಧನೆಯಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುವುದು ಹೆಮ್ಮೆಯ ಸಾಧನೆ ಎಂದರು.


ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ , ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೋಟ್ಟು, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ನ ಟ್ರಸ್ಟಿ ಮೇಘರಾಜ್ ಆರ್ ಜೈನ್ , ಟ್ರಸ್ಟ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪೂರ್ಣಿಮಾ ಶೆಟ್ಟಿ ಹಾಗೂ ಬ್ಯಾಂಕ್ ಅಧಿಕಾರಿಗಳು ಉಪಸ್ಥಿತರಿದ್ದರು.

news-details