<p>ನಿನ್ನೆ ಮುಂಜಾನೆ ಮನೆಯಿಂದ ಹೊರ ಹೋಗಿದ್ದ ಮುಮ್ಜಾಜ್ ಆಲಿ ಅವರ ಕಾರು ಕೂಳೂರಿನ ಸೇತುವೆ ಬಳಿ ಪತ್ತೆಯಾಗಿತ್ತು. ಅಪಘಾತದ ಸ್ಥಿತಿಯಲ್ಲಿ ಕಾರು ಪತ್ತೆಯಾಗಿದ್ದು, ಮುಮ್ತಾಜ್ ಆಲಿ ಅವರು ಕಾರಿನಿಂದ ಇಳಿದು ನಾಪತ್ತೆಯಾಗಿದ್ದರು. ಹೀಗಾಗಿ ಸೇತುವೆಯಿಂದ ಪಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನದಲ್ಲಿ ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ಸೇರಿದಂತೆ ಸ್ಥಳಿಯರಿಂದ ನದಿಯಲ್ಲಿ ಹುಡುಕಾಟ ನಡೆಸಲಾಗಿತ್ತು. ನಿನ್ನೆ ಸಂಜೆಯ ವೇಳೆಗೆ ಮುಳುಗು ತಜ್ಞ ಈಶ್ವರ್ ಮಲ್ಪೆಯ ತಂಡದಿಂದಲೂ ಹುಡುಕಾಟ ನಡೆದಿತ್ತು. ಇದೀಗ ಪಲ್ಗುಣಿ ನದಿಯ ಸೇತುವೆ ಬಳಿಯಲ್ಲೇ ಮೃತ ದೇಹ ಪಲ್ಗುಣಿ ನದಿಯಲ್ಲಿ ಪತ್ತೆಯಾಗಿದೆ. </p>
<p>ಮೃತ ದೇಹ ಪತ್ತೆಯಾಗುತ್ತಿದ್ದಂತೆ ಸಹೋದರ ಮೊಯಿದ್ದೀನ್ ಬಾವ ಬಿಕ್ಕಿ ಬಿಕ್ಕಿ ಅತ್ತಿದ್ದು, ಸಹೋದರನ ಸಾವಿನ ಬಗ್ಗೆ ಪೊಲೀಸರು ತನಿಖೆ ಮಾಡಬೇಕು ಎಂದಿದ್ದಾರೆ. ಸಹೋದರ ಮುಮ್ತಾಜ್ ಸಮಾಜ ಸೇವೆಯ ಮೂಲಕ ಎಲ್ಲಾ ಸಮೂದಾಯದ ಜೊತೆ ಸ್ನೇಹದಿಂದ ಇದ್ದವರು. ಶಾಲೆಯನ್ನು ನಡೆಸುತ್ತಿದ್ದ ಅವರು ಹಲವು ಬಡವರಿಗೂ ಸಹಾಯ ಮಾಡುತ್ತಿದ್ದರು. ಅವರನ್ನು ಯಾರೋ ಬ್ಲ್ಯಾಕ್ ಮೇಲ್ ಮಾಡ್ತಾ ಇದ್ದರು ಅನ್ನೋ ಮಾಹಿತಿ ಇದ್ದು ಅವರ ಬಗ್ಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಆದರೆ ಈ ಬಗ್ಗೆ ಪೊಲೀಸರು ಸೂಕ್ತ ತನಿಕೆ ನಡೆಸಿ ಆರೋಪಿಗಳಿಗೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. <br />
ಮುಮ್ತಾಜ್ ಅಲಿ ಅವರನ್ನು ಹನಿಟ್ರ್ಯಾಪ್ ಮಾಡಿ ಅವರನ್ನು ಬ್ಲ್ಯಾಕ್ಮೇಲ್ ಮಾಡಲಾಗಿತ್ತು ಅನ್ನೋ ಆರೋಪಗಳು ಕೂಡಾ ಕೇಳಿ ಬಂದಿದೆ. ಈ ವಿಚಾರವಾಗಿ ಪೊಲೀಸರು ಓರ್ವ ಮಹಿಳೆ ಸೇರಿ ಆರು ಜನರ ವಿರುದ್ಧ ಎಫ್ಐಆರ್ ದಾಖಿಸಿಕೊಂಡು ಕೆಲವರನ್ನು ವಶಕ್ಕೆ ಪಡೆದಿರುವ ಮಾಹಿತಿ ಇದೆ. ಸುರತ್ಕಲ್ನ ಮೊಬೈಲ್ ಅಂಗಡಿಯೊಂದರ ಮಾಲೀಕನೂ ಇದರಲ್ಲಿ ಶಾಮೀಲಾಗಿದ್ದು ಆತ ತಲೆ ಮರೆಸಿಕೊಂಡಿದ್ದಾಗಿ ಮಾಹಿತಿ ಇದೆ. ಈ ವಿಚಾರವಾಗಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.</p>