ಚಾಂಪಿಯನ್ಸ್ ಟ್ರೋಫಿ:ಕೊಹ್ಲಿ, ಅಯ್ಯರ್ ಅಬ್ಬರಕ್ಕೆ ನಲುಗಿದ ಪಾಕ್, ಭಾರತಕ್ಕೆ ಸುಲಭ ಜಯ

ಕ್ರೀಡೆ

news-details

ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನ ಮೂಲಕ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತ ಸೆಮಿಫೈನಲ್‌ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ.
ವಿರಾಟ್ ಕೊಹ್ಲಿ ಅವರ ಅಮೋಘ ಶತಕದ ನೆರವಿನಿಂದ ಭಾರತ 242 ರನ್‌ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿತು. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿ ಚಾಂಪಿಯನ್ ಆಗಿದ್ದ ಪಾಕಿಸ್ತಾನವನ್ನು ಭಾರತ ಲೀಗ್ ಹಂತದಲ್ಲೇ ಹೊರದಬ್ಬುವ ಮೂಲಕ ಹಳೆ ಬಾಕಿಯನ್ನು ತೀರಿಸಿದೆ.

ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಭಾರತದ ಶಿಸ್ತಿನ ಬೌಲಿಂಗ್ ದಾಳಿ ಎದುರು ರನ್ ಗಳಿಸಲು ಪರದಾಡಿದ ಪಾಕಿಸ್ತಾನ 49.4 ಓವರ್ ಗಳಲ್ಲಿ 241 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಸೌದ್ ಶಕೀಲ್ 62 ರನ್, ಮೊಹಮ್ಮದ್ ರಿಜ್ವಾನ್ 46 ರನ್, ಖುಷ್ದಿಲ್ 38 ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರಿಂದ ಉತ್ತಮ ಪ್ರದರ್ಶನ ಬರಲೇ ಇಲ್ಲ.

ಕುಲದೀಪ್ ಯಾದವ್ 3 ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ 2 ವಿಕೆಟ್ ಪಡೆದರು. ಹರ್ಷಿತ್ ರಾಣಾ, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದರು.
242 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಶುಭಮನ್ ಗಿಲ್, ಶ್ರೇಯಸ್ ಅಯ್ಯರ್ ಅವರ ಉತ್ತಮ ಬ್ಯಾಟಿಂಗ್ ಮತ್ತು ವಿರಾಟ್ ಕೊಹ್ಲಿ ಅವರ ಅಮೋಘ ಶತಕದ ನೆರವಿನಿಂದ ಭರ್ಜರಿ ಗೆಲುವು ಸಾಧಿಸಿತು.

news-details