ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಭಗವಾನ್ ಬಿ. ಸಿ. ಅವರು ಶನಿವಾರ ಎಸ್ ಸಿಡಿಸಿಸಿ ಬ್ಯಾಂಕಿಗೆ ಭೇಟಿ ನೀಡಿ ಬ್ಯಾಂಕಿನ ಕಾರ್ಯಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಸ್ನೇಹಿ ಬ್ಯಾಂಕಾಗಿ ಗುರುತಿಸಿಕೊಂಡಿರುವ ಎಸ್ ಸಿಡಿಸಿಸಿ ಬ್ಯಾಂಕ್ ಸುಸಜ್ಜಿತ ಕಟ್ಟಡವನ್ನು ಹೊಂದಿದ್ದು, ಆಧುನಿಕ ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಬ್ಯಾಂಕಿನ 113 ಶಾಖೆಗಳು ಕೋರ್ ಬ್ಯಾಂಕಿಂಗ್ ಸೌಲಭ್ಯದೊಂದಿಗೆ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಉತ್ತಮ ಸೇವೆಯನ್ನು ನೀಡುತ್ತಿರುವುದು ಅಭಿಮಾನದ ವಿಚಾರವಾಗಿದೆ ಎಂದರು.
ಎಸ್ ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಂ. ಎನ್. ರಾಜೇಂದ್ರಕುಮಾರ್ ಅವರು ಬ್ಯಾಂಕಿನ ಪ್ರಗತಿಯ ಕುರಿತು ವಿವರಿಸಿದರು. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವ ಸ್ವಸಹಾಯ ಸಂಘಗಳ ಕಾರ್ಯನಿರ್ವಹಣೆಯಲ್ಲೂ ಬ್ಯಾಂಕ್ ಸಮರ್ಪಕವಾಗಿ ಕಾರ್ಯನಿರ್ವಹಿಸಿ ಸುಮಾರು 39000ಕ್ಕೂ ಹೆಚ್ಚು ನವೋದಯ ಸಂಘಗಳು ರಚನೆ ಮಾಡಿದ್ದು, ಇದೀಗ ನವೋದಯ ಸ್ವಸಹಾಯ ಸಂಘಗಳು ರಜತ ಸಂಭ್ರಮದಲ್ಲಿದ್ದು, ಮೇ-10 ರಂದು ಐತಿಹಾಸಿಕ ಸಮಾರಂಭ ಮಂಗಳೂರಿನಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಸನ್ಮಾನ : ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಉಪಕುಲಪತಿ ಆಗಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ಬ್ಯಾಂಕಿಗೆ ಆಗಮಿಸಿದ ಡಾ. ಭಗವಾನ್ ಬಿ. ಸಿ.ಹಾಗೂ ರಾಜ್ಯ ಅಲೈಡ್ ಎಂಡ್ ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ. ಯು. ಟಿ. ಇಫ್ತಿಕಾರ್ ಅಲಿ ಅವರನ್ನು ಬ್ಯಾಂಕ್ ವತಿಯಿಂದ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಗೌರವಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಶ್ರೀನಿವಾಸ್, ಸೆನೆಟ್ ಸದಸ್ಯ ಡಾ. ಮಧುಸೂಧನ್, ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಉದ್ಯಮಿ ಇನಾಯಿತ್ ಅಲಿ, ಜಯಪ್ರಕಾಶ್ ತುಂಬೆ, ರತ್ನಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.