ನಗರದ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನ ಆಚಾರ್ಯಮಠ ವಠಾರದ 102ನೇ ವರ್ಷದ ಶಾರದಾ ಮಹೋತ್ಸವದಲ್ಲಿ ಪೂಜಿಸಲ್ಪಟ್ಟ ಶ್ರೀ ಶಾರದಾ ಮಾತೆಯ ವಿಸರ್ಜನಾ ಶೋಭಾಯಾತ್ರೆ ಸೋಮವಾರ ರಾತ್ರಿ ಸಹಸ್ರಾರು ಮಂದಿ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಅ. 8ರಿಂದ ಆರಂಭಗೊಂಡ ಶಾರದಾ ಮಹೋತ್ಸವು ಅ.14ರ ವರೆಗೆ ಪ್ರತಿ ದಿನ ವೈದಿಕ ವಿಧಿ ವಿಧಾನಗಳೊಂದಿಗೆ ಮತ್ತು ದೇವಸ್ಥಾನದ ಮುಂಭಾಗದ ವೇದಿಕೆಯಲ್ಲಿ ಪ್ರತಿ ದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ವೈಭವ ಪೂರ್ಣವಾಗಿ ನಡೆಯಿತು. ಅ.14ರ ಸಂಜೆ ಮಾತೆಯನ್ನು ಸರ್ವಾಲಂಕೃತಗೊಳಿಸಿ, ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಸಹಸ್ರಾರು ಭಜಕರು ಪಾಲ್ಗೊಂಡು ಶಾರದಾ ಮಾತೆಯನ್ನು ಕಣ್ತುಂಬಿಕೊಂಡು ಪ್ರಸಾದ ಸ್ವೀಕರಿಸಿ ಪುನೀತರಾದರು.

ಶ್ರೀ ಶಾರದಾ ಮಾತೆಗೆ ಸೋಮವಾರ ಸಂಜೆ ಪೂರ್ಣಾಲಂಕಾರ ನಡೆದು ಚಿತ್ರಾಪುರ ಮಠ ಸಂಸ್ಥಾನದ ಶ್ರೀಮದ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಗಳವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಶಾರದಾ ಮಾತೆಗೆ ಶ್ರೀಗಳವರು ಅಮೃತ ಹಸ್ತಗಳಿಂದ ಮಹಾ ಮಂಗಳಾರತಿ ನೆರವೇರಿತು.

ಮಂಗಳೂರು ಶಾರದೆಯ ವಿಸರ್ಜನಾ ಮೆರವಣಿಗೆಯಲ್ಲಿ ಚಿತ್ರಾಪುರ ಮಠ ಸಂಸ್ಥಾನದ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಗಳವರು ಸರಸ್ವತಿ ಕಲಾಮಂಟಪದಲ್ಲಿ ಆಸೀನರಾಗಿ ಶೋಭಾಯಾತ್ರೆಯ ವೈಭವವನ್ನು ವೀಕ್ಷಿಸಿದರು.

ಸಂಜೆ ಶ್ರೀಗಳಿಗೆ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಶ್ರೀ ಶಾರದಾ ಮಹೋತ್ಸವ ಸಮಿತಿಯಿಂದ ಶ್ರೀಗಳವರಿಗೆ ಶ್ರೀ ದೇವಳದಲ್ಲಿ ಸ್ವಾಗತ ನೀಡಲಾಯಿತು. ಬಳಿಕ ಶ್ರೀ ದೇವರ ಭೇಟಿ, ಶ್ರೀ ಶಾರದಾ ಮಾತೆಯ ವಸಂತ ಮಂಟಪಕ್ಕೆ ಆಗಮಿಸಿ ಶ್ರೀ ಶಾರದಾ ಮಾತೆಗೆ ಮಾಹಾ ಆರತಿ ನೆರವೇರಿತು.

ಬಳಿಕ ಶ್ರೀ ಶಾರದಾ ಮಾತೆಯ ವಿಸರ್ಜನಾ ಶೋಭಾಯಾತ್ರೆಯು ಉತ್ಸವ ಸ್ಥಾನದಿಂದ ಹೊರಟು ಶ್ರೀ ಮಹಾಮಾಯ ದೇವಾಲಯವಾಗಿ, ಕೆನರಾ ಹೈಸ್ಕೂಲ್‌ನ ಹಿಂಬದಿಯಿಂದ ನವಭಾರತ್ ವೃತ್ತ ತಲುಪಿ ಅಲ್ಲಿಂದ ಡೊಂಗರಕೇರಿಯ ಮೂಲಕ ನ್ಯೂಚಿತ್ರಾ ಟಾಕೀಸ್, ಬಸವನಗುಡಿ, ಚಾಮರಗಲ್ಲಿ, ರಥಬೀದಿಯಾಗಿ ಶ್ರೀ ಮಹಾಮಾಯಿ ತೀರ್ಥದಲ್ಲಿ ಜಲಸ್ತಂಭನಗೊಳಿಸಲಾಯಿತು.

ಸ್ವಯಂಸೇವಕರು ಭುಜ ಸೇವೆಯ ಮೂಲಕ ಶ್ರೀ ಮಾತೆಯ ವಿಗ್ರಹದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು. ವರ್ಷಪ್ರತಿಯಂತೆ ಹರಕೆಯ ಶಾರದಾ ಹುಲಿವೇಷದ ಟ್ಯಾಬ್ಲೋ ಗಳು ಗಮನ ಸೆಳೆದವು.

ಸಮಿತಿ ಅಧ್ಯಕ್ಷ ಡಾ| ಉಮಾನಂದ ಮಲ್ಯ, ಕಾರ್ಯದರ್ಶಿ ಅಡಿಗೆ ಬಾಲಕೃಷ್ಣ ಶೆಣೈ, ಪಂಡಿತ್ ನರಸಿಂಹ ಆಚಾರ್ಯ, ಜೋಡುಮಠ ಭಾಸ್ಕರ್ ಭಟ್, ದತ್ತಾತ್ರೇಯ ಭಟ್, ಗಣೇಶ್ ಬಾಳಿಗ, ಸುರೇಶ್ ಕಾಮತ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ್ ಕಾಮತ್, ನಂದನ್ ಮಲ್ಯ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಎಸ್‌ಪಿ ಅನುಪಮ್ ಅಗರ್‌ವಾಲ್ ಸಹಿತ ಊರ - ಪರವೂರ ಹಲವಾರು ಗಣ್ಯರು, ಸಾವಿರಾರು ಭಜಕರು ಪಾಲ್ಗೊಂಡು ಪುನೀತರಾದರು.