<p>ಶ್ರೀ ನೆಲ್ಲಿತೀರ್ಥ ಸೋಮನಾಥೇಶ್ವರ ಗುಹಾಲಯವು, (ನೀರುಡೆ, ಮಂಗಳೂರು ತಾಲೂಕು ದ.ಕ. ಜಿಲ್ಲೆ) ಬಹಳ ಪುರಾತನ ಶಿವ ದೇವಾಲಯವಾಗಿದ್ದು ಒಂದು ಸುಪ್ರಸಿದ್ಧ ಗುಹಾ ತೀರ್ಥಕ್ಷೇತ್ರವಾಗಿದೆ. ಇದು ಮಹಾನ್ ತಪಸ್ವಿ ಮಹರ್ಷಿ ಜಾಭಾಲಿಗಳು ತವಸ್ಸು ಮಾಡಿ ಭೂಮಿಗೆ 'ನಂದಿನಿ' ನದಿಯನ್ನು ಹರಿಸಿದಂತ ಪೌರಾಣಿಕ ಸ್ಥಳ. ತಪ್ಪಸ್ಸಿಗೆ ಮೆಚ್ಚಿದ ಶ್ರೀ ದುರ್ಗಾ ಪರಮೇಶ್ವರಿಯು ಜಾಬಾಲಿ ಋಷಿಯ ಮುಂದೆ ಪ್ರತ್ಯಕ್ಷಳಾಗಿ ಅರುಣಾಸುರನನ್ನು ಕೊಲ್ಲುವ ಭರವಸೆಯನ್ನು ನೀಡಿ, ನಂದಿನಿ ನದಿ ತೀರದಲ್ಲಿ ಭ್ರಾಮರೀ (ದುಂಬಿಯ) ಆಕಾರದಲ್ಲಿ ಉದ್ಭವಿಸಿ ಅರುಣಾಸುರನನ್ನು ಹಾಗು ಇತರ ರಾಕ್ಷಸಗಣಗಳನ್ನು ಸಂಹಾರ ಮಾಡುತ್ತಾಳೆ. ಹಾಗೆಯೇ ಈ ನಂದಿನಿ ನದಿಯ ಕಟಿ ಪ್ರದೇಶದಲ್ಲಿ ದುರ್ಗಾಪರಮೇಶ್ವರಿಯಾಗಿ ನೆಲೆಗೊಳ್ಳುತ್ತಾಳೆ. ಈ ಸನ್ನಿದಿಯೇ ಈಗಿನ ಪ್ರಖ್ಯಾತ ಕಟೀಲು ಕ್ಷೇತ್ರವಾಗಿ ಅತ್ಯಂತ ಪ್ರಸಿದ್ಧವಾದ ದೇವಾಲಯವೆಂದು ಖ್ಯಾತಿ ಪಡೆದಿದೆ. ಹಾಗಾಗಿ ನೆಲ್ಲಿತೀರ್ಥ ಮತ್ತು ಕಟೀಲು ಕ್ಷೇತ್ರಗಳಿಗೆ ಅನೋನ್ಯ ಸಂಬಂಧವಿದೆ. ಈ ಕ್ಷೇತ್ರದ ವಿಶೇಷತೆಯೆಂದರೆ, ದೇವಾಲಯದ ಬಲಬಾಗದಲ್ಲಿರುವ ನೈಸರ್ಗಿಕವಾದ ಅದ್ಭುತ ಗುಹೆ ಹಾಗೂ ಅದರೊಳಗಿನ ಪುಣ್ಯ ತೀರ್ಥಸ್ನಾನ.</p>