ಹಣ ಸಂಪಾದಿಸುವುದು, ಪದವಿ ಪಡೆದುಕೊಳ್ಳುವುದು ಮಾತ್ರ ಶಿಕ್ಷಣದ ಉದ್ದೇಶವಲ್ಲ. ನಮ್ಮನ್ನು ನಾವು ಸವ್ಯಸಾಚಿಯನ್ನಾಗಿ ಮಾಡುವುದೇ ಶಿಕ್ಷಣದ ಉದ್ದೇಶ ಎಂದು ಕ್ವಿಜ್ ಮಾಸ್ಟರ್, ಲೇಖಕ ಡಾ| ನಾ. ಸೋಮೇಶ್ವರ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಶುಕ್ರವಾರ ಮೂಡುಬಿದಿರೆಯ ಸೌಟ್ಸ್-ಗೈಡ್ಸ್ ಕನ್ನಡ ಭವನದ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ನಡೆದ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇನ್ನೊಬ್ಬರ ಕುಶಲ ಕ್ಷೇಮ ವಿಚಾರಿಸುವುದು ಭಾರತೀಯ ಸಂಸ್ಕೃತಿ. ಪೋಷಕರು ಮಕ್ಕಳಿಗೆ ಭಾರತೀಯ ಸಂಸ್ಕೃತಿಯ ಜೊತೆಗೆ ಸಂಸ್ಕಾರವನ್ನು ಕಲಿಸಬೇಕು. ಇಂತಹ ಮೂಲಭೂತ ವಿಚಾರಗಳನ್ನು ಮಕ್ಕಳಿಗೆ ಕಲಿಸುವುದು ಪೋಷಕರ ಕರ್ತವ್ಯ ಮಾತ್ರವಲ್ಲ ಧರ್ಮವೂ ಆಗಿದೆ ಎಂದರು.
ನಮ್ಮ ಮೆದುಳಿನ ರಚನೆಯಲ್ಲಿ ಅರೆಗೋಳ ಎಂಬ ಭಾಗವಿದೆ. ಎಡ ಅರೆಗೋಳವು ಸದಾ ಲೆಕ್ಕಾಚಾರಗಳಂತಹ ತಾರ್ಕೀಯ ವಿಚಾರಗಳ ಬಗ್ಗೆ ಯೋಚಿಸುತ್ತದೆ. ಅದು ಯಾವುದೇ ಭಾವನೆ, ಮಾತಿನ ವೈಖರಿಗೆ ಬಲಿಯಾಗುವುದಿಲ್ಲ. ಬಲ ಅರೆಗೋಳ ಭಾವನೆಗಳಿಗೆ ಆದ್ಯತೆ ನೀಡುತ್ತದೆ ಎಂದರು.
ಇವತ್ತಿನ ಶಿಕ್ಷಣ ವ್ಯವಸ್ಥೆ ಕೇವಲ ಎಡ ಅರೆಗೋಳಕ್ಕೆ ಆದ್ಯತೆ ನೀಡುತ್ತಿದೆ. ಭಾವನೆಗಳನ್ನು ವ್ಯಕ್ತಪಡಿಸುವ ಬಲ ಅರೆಗೋಳಕ್ಕೂ ಆದ್ಯತೆ ನೀಡಬೇಕು ಎಂದರು.
ಪೋಷಕರು ಮಕ್ಕಳ ಜನ್ಮದತ್ತ ಪ್ರತಿಭೆಗಳನ್ನು ಗುರುತಿಸಬೇಕು. ಪೋಷಕರ ನಂತರ ವಿದ್ಯಾರ್ಥಿಗಳ ಪ್ರತಿಭೆಯನ್ನು ಅಧ್ಯಾಪಕರು ಗುರುತಿಸಿಬೇಕು. ಸತ್ಯವನ್ನು ವಿಶ್ಲೇಷಿಸುವ ಸಾಮರ್ಥ್ಯ, ಭಾಷಾ ಪ್ರಾಬ್ಯುದ್ಧತೆ ಎಲ್ಲರಲ್ಲಿಯೂ ಇರುವುದಿಲ್ಲ ಪೋಷಕರು ಆಸಕ್ತಿಯಿಲ್ಲದ ವಿಚಾರದಲ್ಲಿ ಮಕ್ಕಳು ವಿದ್ಯಾಭ್ಯಾಸ ಪಡೆದರೆ ನಾವು ಉತ್ತಮ ಪ್ರತಿಭೆಗಳನ್ನು ಕಳೆದುಕೊಳ್ಳುತ್ತೇವೆ. ಮಗು ಸಾರ್ಥಕತೆಯನ್ನು ಪಡೆಯಬೇಕಾದರೆ ಮಗುವಿನ ಪ್ರತಿಭೆಗಳನ್ನು ಗುರುತಿಸುವುದು ಅಗತ್ಯ ಎಂದರು. ಆಳ್ವಾಸ್ ಶಿಕ್ಷಣ ಸಂಸ್ಥೆ ಎಡ ಅರೆಗೋಳ ಜೊತೆಗೆ ಬಲ ಅರೆಗೋಳದ ಯೋಚನೆಗಳಿಗೂ ಮನ್ನಣೆ ನೀಡುವ ಶಿಕ್ಷಣ ನೀಡುತ್ತಿದೆ ಎಂದರು.
ಜೀವನಕ್ಕೆ ಹಣ ಬೇಕು ಆದರೆ ಹಣ ಸುಖವನ್ನು ನೀಡುವುದಿಲ್ಲ. ಸುಖವನ್ನು ನೀಡುವುದು ಲಲಿತಕಲೆಗಳು ಮಾತ್ರ. ಅದಕ್ಕಾಗಿ ಎಡ ಅರೆಗೋಳ ಜೊತೆಗೆ ಬಲ ಅರೆಗೋಳದ ಯೋಚನೆಗಳೂ ಅಗತ್ಯ. ಕಲೆ, ಸಾಹಿತ್ಯ, ಸಂಸ್ಕೃತಿಯೊAದಿಗೆ ಭಾವನೆಗಳಿಗೂ ಮನ್ನಣೆ ನೀಡುವುದು ಮುಖ್ಯ ಎಂದು ಸಲಹೆ ನೀಡಿದರು.
ಪೋಷಕರ ಬಗ್ಗೆ ನಿಮ್ಮ ಕರ್ತವ್ಯಗಳನ್ನು ಯೋಚಿಸಿ ನಿಜವಾದ ಆತ್ಮ ಬಂಧುಗಳು ನಮ್ಮ ತಂದೆ ತಾಯಿಗಳು ಅವರನ್ನು ದುಃಖಿತರನ್ನಾಗಿ ಮಾಡಬೇಡಿ ಗೌರವಿಸಿ. ನಿಮ್ಮ ತಂದೆ ತಾಯಿಗೆ, ದೇಶಕ್ಕೆ ನಿಮ್ಮ ಅಗತ್ಯವಿದೆ. ದೇಶಕ್ಕೆ ನೀವು ಏನು ನೀಡಿದ್ದೀರಿ ಎಂದು ಯೋಚಿಸಿ ಎಂದರು.
ಕಾಲೇಜಿನ ಉಪ ಪ್ರಾಂಶುಪಾಲೆ ಪಿ. ಎನ್. ಜಾನ್ಸಿ ಮಾತನಾಡಿ, ನಮ್ಮ ಸ್ವಾರ್ಥಗಳನ್ನು ಬದಿಗಿಟ್ಟು ನಮ್ಮ ತಂದೆ ತಾಯಿ ನಮಗೆ ನೀಡಿದ ಕೊಡುಗೆಯನ್ನು ನೆನಪು ಮಾಡಿಕೊಳ್ಳಬೇಕು. ತಲೆಮಾರು ಎಷ್ಟೇ ಬದಲಾದರು ಇಂತಹ ಗುಣಗಳನ್ನು ಮರೆಯಬಾರದು. ಸಮಾಜ ನಮಗೆ ಏನು ಕೊಟ್ಟಿದೆ. ನಾವು ಏನನ್ನು ಕಲಿತಿದ್ದೇವೆ ಎಂದು ಯೋಚಿಸಿ ಎಂದರು.
ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ. ಡಿ. ಮಾತನಾಡಿ, ವಿದ್ಯೆಯಿಂದ ಏನನ್ನು ಕಲಿಯಬೇಕು ಎಂಬುದನ್ನು ಮನದಟ್ಟು ಮಾಡಿಕೊಂಡರೆ ಸಮಾಜದಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳಬಹುದು. ನಾವು ವಿದ್ಯಾವಂತರಾಗಿ ನಮ್ಮ ತಂದೆ ತಾಯಿಯನ್ನು ನೋಡಿಕೊಳ್ಳದಿದ್ದರೆ ಆ ವಿದ್ಯೆಗೆ ಏನು ಬೆಲೆ ಎಂಬುದನ್ನು ಯೋಚಿಸಬೇಕು.
ಈ ಕಾರ್ಯಕ್ರಮದ ಉದ್ದೇಶ ವಿದ್ಯಾರ್ಥಿಗಳ ಸಾಮರ್ಥ್ಯ ಏನು ಎಂಬುದು ಅವರ ಅರಿವಿಗೆ ಬರಬೇಕು, ಅವರಿಗೆ ವೇದಿಕೆ ಸಿಗಬೇಕು ಎನ್ನುವುದು.
ಡಾ. ನಾ. ಸೋಮೇಶ್ವರ ಅವರನ್ನು sಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ವಿವಿಧ ವಿಭಾಗಗಳಲ್ಲಿ ಉನ್ನತ ಸಾಧನೆ ಮೆರೆದ ೨೫೪ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಬಗೆಯ ಸಾಂಸ್ಕೃತಿಕ ಕರ‍್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ಸಂಸ್ಕೃತ ವಿಭಾಗದ ಮುಖ್ಯಸ್ಥ ಅಂಬರೀಷ್ ಚಿಪ್ಣೂಳ್ಕರ್ ಸ್ವಾಗತಿಸಿದರು. ಕಲಾ ವಿಭಾಗದ ಡೀನ್ ಕೆ. ವೇಣುಗೋಪಾಲ್ ಶೆಟ್ಟಿ ನಿರೂಪಿಸಿದರು. ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಸುನಿಲ್ ವಂದಿಸಿದರು.