ವಾರ್ಷಿಕ ಸಂಚಿಕೆಗಳು ಶಿಕ್ಷಣ ಸಂಸ್ಥೆಯ ಸಾಹಿತ್ಯದ ಸೃಜನಾತ್ಮಕ ಚಟುವಟಿಗೆಗಳಿಗೆ ಹಿಡಿದ ಕೈಗನ್ನಡಿ ಎಂದು ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ಡೀನ್ ವೇಣುಗೋಪಾಲ್ ಶೆಟ್ಟಿ ನುಡಿದರು.
ಅವರು ಕಾಲೇಜಿನ ಕುವೆಂಪು ಸಭಾಂಗಣ ದಲ್ಲಿ ಶನಿವಾರ ನಡೆದ ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ "ಉತ್ತುಂಗ" ಚೊಚ್ಚಲ ವಾರ್ಷಿಕ ಸಂಚಿಕೆ ಬಿಡುಗಡೆ ಕರ‍್ಯಕ್ರಮದಲ್ಲಿ ಮಾತನಾಡಿದರು.
ಪ್ರಶಿಕ್ಷಣಾರ್ಥಿಗಳು ಮುಂದೆ ಗುರುಗಳಾಗುವವರು. ಇಂತಹ ಸ್ಮರಣ ಸಂಚಿಕೆಗಳು ಮುಂದೆ ಬರುವ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದರು. ಈಗಿನ ವಿದ್ಯಾರ್ಥಿಗಳು ಬರವಣಿಗೆಯ ಹವ್ಯಾಸವನ್ನು ಬೆಳೆಸಿಕೊಳ್ಳುವುದಿಲ್ಲ. ಅತಿಯಾದ ಮೊಬೈಲ್ ಫೋನ್ ಬಳಕೆಯಿಂದ ರೋಬೋಟ್ಗಳಂತೆ ವರ್ತಿಸುತ್ತಾರೆ. ಇಂತಹ ಸಾಹಿತ್ಯ ಕಾರ್ಯಕ್ರಮಗಳು ಸಾಮಾಜಿಕ ವಿಷಯಗಳಲ್ಲಿ ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನು ಮೂಡಿಸುತ್ತದೆ ಎಂದರು.
ಆಳ್ವಾಸ್ ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ. ಎನ್‌ಪಿ ನಾರಾಯಣ ಶೆಟ್ಟಿ ವಾರ್ಷಿಕ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ಒಂದು ವಾರ್ಷಿಕ ಸಂಚಿಕೆ ಬಿಡುಗಡೆಯಾಗುವಾಗ ಮೊದಲು ನೋಡುವುದು ವಿನ್ಯಾಸ, ವಿಷಯಗಳ ವೈವಿಧ್ಯತೆ, ಭಾಷಾ ವೈವಿಧ್ಯತೆ. ವಿದ್ಯಾರ್ಥಿಗಳು ಬೇರೆ ಬೇರೆ ವಿಷಯಗಳಲ್ಲಿ ಬರವಣಿಗೆಯನ್ನು ವೃದ್ಧಿಸಿಕೊಂಡಾಗ ಆ ಬರವಣಿಗೆಗಳು ಆಕಾರ ಗ್ರಂಥವಾಗಿ ಹೊರ ಬರುತ್ತದೆ. ಶಿಕ್ಷಕ ವೃತ್ತಿಗಿಂತ ಉತ್ತಮವಾದ ವೃತ್ತಿ ಬೇರೊಂದಿಲ್ಲ. ಶಿಕ್ಷಕ ವೃತ್ತಿ ಎಂದರೆ ನಿರಂತರ ಅಧ್ಯಯನ. ಅದಕ್ಕೆ ಕೊನೆಯಿಲ್ಲ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಶಂಕರಮೂರ್ತಿ ಎಚ್. ಕೆ. ಮಾತನಾಡಿ, ಇದು ಕಾಲೇಜಿನ ಚೊಚ್ಚಲ ವಾರ್ಷಿಕ ಸಂಚಿಕೆ ಎನ್ನುವುದು ಹೆಮ್ಮೆಯ ವಿಚಾರ. ಸ್ವಾಮಿ ವಿವೇಕಾನಂದರರಿಗೆ ಪ್ರಿಯವಾದ ಪದ ‘ಉತ್ತುಂಗ’. ವಿವಿಧ ಶೀರ್ಷಿಕೆಗಳ ಕುರಿತು ಯೋಚಿಸಿ ಕೊನೆಗೆ ಆಯ್ಕೆ ಮಾಡಿದ ಹೆಸರು ಇದು. ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತುಂಗ ಸ್ಥಾನದಲ್ಲಿದಲ್ಲಿರುವ ನಮ್ಮ ಸಂಸ್ಥೆಗೆ ಈ ಶೀರ್ಷಿಕೆ ಸೂಕ್ತವಾಗಿದೆ ಎಂದರು. ವಾರ್ಷಿಕ ಸಂಚಿಕೆಯ ಕರ‍್ಯನಿರ್ವಾಹಕ ಸಂಪಾದಕ ರಘುನಂದನ ಕೆ ಇದ್ದರು. ವಿದ್ಯಾರ್ಥಿ ಜಯಸೂರ್ಯ ಸ್ವಾಗತಿಸಿದರು. ಮಾನಸ ನಿರೂಪಿಸಿದರು.