ಈ ದೇಶದಲ್ಲಿ ಸಂಸ್ಕೃತಿ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಧಾರ್ಮಿಕ ಸಂಸ್ಥೆಗಳು ತಮ್ಮದೇ ಕೊಡುಗೆ ನೀಡುತ್ತಿವೆ ಎಂದು ಭಾರತದ ಉಪ ರಾಷ್ಟ್ರಪತಿ ಜಗದೀಪ್ ಧನ್‌ಕರ್ ಹೇಳಿದ್ದಾರೆ.
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತಾದಿಗಳಿಗೆ ಸುಸಜ್ಜಿತ ಸೌಕರ್ಯಗಳೊಂದಿಗೆ ಆರಾಮದಾಯಕ ಸರತಿ ಸಾಲಿನ ವ್ಯವಸ್ಥೆಗಳನ್ನೊಳಗೊಂಡ ನೂತನ ಸಂಕೀರ್ಣ ‘ಶ್ರೀಸಾನ್ನಿಧ್ಯ’ ಮತ್ತು 2024-25ರ ಜ್ಞಾನದೀಪ ಕಾರ್ಯಕ್ರಮದ ಶುಭಾರಂಭ ನೆರವೇರಿಸಿ ಅವರು ಮಂಗಳವಾರ ಇಲ್ಲಿನ ಅಮೃತವರ್ಷಿಣಿ ಸಭಾಭವನದಲ್ಲಿ ಮಾತನಾಡಿದರು.
ಧಾರ್ಮಿಕ ಸಂಸ್ಥೆಗಳೇ ಈ ದೇಶದ ಗ್ರಾಮೀಣ ಪ್ರದೇಶದ ಶಕ್ತಿಯಾದರೆ, ಶಿಕ್ಷಣವೇ ದೇಶದಲ್ಲಿ ಸಮಾನತೆ ತರುವ ಮುಖ್ಯ ಸಾಧನವಾಗಿದೆ. ನಮ್ಮ ನಾಗರಿಕ ಜೀವನ ಇನ್ನಷ್ಟು ಬೆಳಗಬೇಕು. ದೇಶದಲ್ಲಿ ಸೌಹಾರ್ದ ವಾತಾವರಣ ಬೆಳೆಸಬೇಕು ಎಂದು ಅಭಿಪ್ರಾಯಪಟ್ಟರು.
ಪ್ರಜಾಪ್ರಭುತ್ವ ನಮಗೆ ಎಲ್ಲ ಸ್ವಾತಂತ್ರ್ಯ ಕೊಟ್ಟಿದೆ. ಅಭಿಪ್ರಾಯ ಹೇಳಿಕೊಳ್ಳುವ ಸ್ವಾತಂತ್ರ್ಯ ಇದೆ.
ಸಶಕ್ತ ಪ್ರಜಾಪ್ರಭುತ್ವ ನಮ್ಮಲ್ಲಿದೆ, ಜನರ ಅಭಿಪ್ರಾಯಕ್ಕೆ ಬೆಲೆ ಇದೆ. ಜನಪ್ರತಿನಿಧಿಗಳು ಜನರ ಆದ್ಯತೆಗೆ ಬೆಲೆ ಕೊಡಬೇಕಿದೆ. ಸಂವಿಧಾನವೇ ನಮ್ಮಲ್ಲಿ ಪರಮೋಚ್ಛವಾದುದು. ಜನರ ಮತಕ್ಕೆ ಬೆಲೆ ಇದ್ದರೆ ಮಾತ್ರ ಸಶಕ್ತ ಪ್ರಜಾಪ್ರಭುತ್ವ ಸಾಧ್ಯ ಎಂದು ಅವರು ಹೇಳಿದರು.
ದೇಶ ಸೇವೆಗೆ ಮುಂದೆ ಬನ್ನಿ:
ನಾವು ರಾಜಕೀಯವಾಗಿ ಇನ್ನಷ್ಟು ಪ್ರಬಲರಾಗಬೇಕು. ದೇಶವನ್ನು ಮತ್ತಷ್ಟು ಎತ್ತರಕ್ಕೆ ಒಯ್ಯಲು ಒಗ್ಗೂಡಬೇಕು. ಮೆಸಪಟೋಮಿಯಾ, ಚೀನಾ ನಾಗರಿಕತೆ ನಾಶವಾಗಿದೆ. ಆದರೆ ನಮ್ಮ ನಾಗರಿಕತೆ ಮಾತ್ರ ಇನ್ನೂ ಬೆಳೆಯುತ್ತಿದೆ. ಬಾಹ್ಯ ಶಕ್ತಿಗಳು ನಮ್ಮನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿವೆ. ಸಾರ್ವಜನಿಕ ಸೊತ್ತುಗಳನ್ನು ನಾಶಮಾಡುವಂತಹ ವೈಪರೀತ್ಯಗಳು ಸಂಭವಿಸುತ್ತಿವೆ. ಇವುಗಳಿಗೆ ಪೂರ್ಣ ತಿಲಾಂಜಲಿ ನೀಡಬೇಕು. 2047ರ ವೇಳೆಗೆ ಪರಿಪೂರ್ಣ ಸಶಕ್ತ ಭಾರತದ ಗುರಿಯನ್ನು ತಲುಪಬೇಕಾಗಿದೆ. ದೇಶ ಆಂತರಿಕವಾಗಿ ಸಶಕ್ತ ಆಗಬೇಕಿದೆ. ದೇಶದ ಸೇವೆಗಾಗಿ ಜನತೆ ಮುಂದೆ ಬರಬೇಕಿದೆ ಎಂದರು.
ರಾಜಕಾರಣಿಗಳು ವಿಭಿನ್ನ ಸಿದ್ಧಾಂತ ಹೊಂದಿರಬಹುದು. ಆದರೆ ನಮ್ಮ ಸಂಸ್ಕೃತಿ, ಸಂಸ್ಕಾರ ಮರೆಯಬಾರದು. ದಿನದ 24 ಗಂಟೆಯೂ ರಾಜಕಾರಣವೇ ಮುಖ್ಯವಾಗಿರಬೇಕೇ ? ದೇಶ ಸೇವೆಗೆ ಸಮಯ ವಿನಿಯೋಗ ಮಾಡುತ್ತಿದ್ದಾರೆಯೇ ? ನಮ್ಮ ಸಮಾಜ ಯಾಕೆ ಧ್ರುವೀಕರಣ ಆಗುತ್ತಿದೆ ಇತ್ಯಾದಿ ಬಗ್ಗೆ ಯೋಚಿಸಬೇಕು. ಅತ್ಯುನ್ನತ ನಾಗರಿಕತೆ ನಮ್ಮದು. ಯಾವುದಕ್ಕೂ ದ್ವೇಷ ಉತ್ತರವಲ್ಲ. ದೇಶದಲ್ಲಿ ಸಮಗ್ರತೆ, ವೈವಿಧ್ಯತೆಯನ್ನು ಉಳಿಸಿಕೊಳ್ಳಬೇಕಾಗಿದೆ. ನಾವು ಸೌಹಾರ್ದ ವಾತಾವರಣ ಉಳಿಸಿಕೊಳ್ಳುವುದು ಮುಖ್ಯ. ದೇಶದ ಜನರಲ್ಲಿ ಮೂಲಭೂತ ಕರ್ತವ್ಯದ ಬಗ್ಗೆ ಜಾಗೃತಿ ಮೂಡಬೇಕಾಗಿದೆ. ಸಾಮಾಜಿಕ ಸದ್ಭಾವ ಬರಬೇಕಾದರೆ ಭಾರತಮಾತೆ ಒಂದೇ ಎಂದು ಭಾವಿಸಿದಾಗ ಈ ಭಾವನೆ ಬರುತ್ತದೆ. ನಾವು ದೇಶಕ್ಕಾಗಿ ಕೆಲಸ ಮಾಡಬೇಕಿದೆ. ದೇಶವೇ ಮೊದಲ ಆದ್ಯತೆ ಆಗಬೇಕಿದೆ ಎಂದು ಅವರು ಆಶಿಸಿದರು.
ಭಾರತೀಯ ಕಾರ್ಪೊರೇಟ್ ಸಂಸ್ಥೆಗಳು ಧಾರ್ಮಿಕ ಸಂಸ್ಥೆಗಳ ಮೂಲಸೌಕರ್ಯ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಉತ್ತೇಜಿಸಲು ಸಿಎಸ್‌ಆರ್ ನಿಧಿಯನ್ನು ಕಾಣಿಕೆಯಾಗಿ ನೀಡುತ್ತಿವೆ. ಈ ಭೂಮಿಯನ್ನು ಪರಿಸರಸ್ನೇಹಿಯಾಗಿ ಕಾಣುವುದರ ಜೊತೆಗೆ ಎಳವೆಯಲ್ಲೇ ಮಕ್ಕಳು ಧಾರ್ಮಿಕತೆಗೆ ತೆರೆದುಕೊಳ್ಳುವಂತೆ ಮಾಡಬೇಕು. ದೇಶಕ್ಕಾಗಿ ಕೆಲಸ ಮಾಡುವ ಮಾನಸಿಕತೆಯನ್ನು ಎಲ್ಲರಲ್ಲೂ ಬೆಳೆಸಬೇಕು ಎಂದು ಅವರು ಆಶಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ,.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು.
ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ, ಜ್ಞಾನವಿಕಾಸ ಮಹಿಳಾ ಸಬಲೀಕರಣ ಕಾರ್ಯಕ್ರಮಗಳ ಅಧ್ಯಕ್ಷೆ ಡಾ.ಹೇಮಾವತಿ ಹೆಗ್ಗಡೆ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್, ಉಪಾಧ್ಯಕ್ಷ ಡಿ.ಸುರೇಂದ್ರ ಕುಮಾರ್ ವೇದಿಕೆಯಲ್ಲಿದ್ದರು.
ಉಪನ್ಯಾಸಕ ಡಾ.ಶ್ರೀಧರ ಭಟ್ ನಿರೂಪಿಸಿದರು.
ಧರ್ಮಸ್ಥಳದಲ್ಲಿ ಸಮಾನತೆ ದರ್ಶನ :
ಧಾರ್ಮಿಕ ಸ್ಥಳಗಳಲ್ಲಿ ವಿಐಪಿ ಸಂಸ್ಕೃತಿಗೆ ಹೆಚ್ಚಿನ ಸ್ಥಾನ ನೀಡಬಾರದು. ಇದು ದೈವತ್ವಕ್ಕೆ ವಿರುದ್ಧವಾಗಿದೆ. ಧಾರ್ಮಿಕ ಸಂಸ್ಥೆಗಳು ಸಮುದಾಯ ಸೇವೆಯ ಕೇಂದ್ರಗಳಾಗಿವೆ. ಧರ್ಮಸ್ಥಳ ಕ್ಷೇತ್ರವು ಗ್ರಾಮೀಣ ಭಾರತಕ್ಕೆ ಸೇವೆ ಸಲ್ಲಿಸುತ್ತಿದೆ. ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಿ, ಸಮಾನತೆಯನ್ನು ತರಬೇಕು. ಈ ಕಾರ್ಯದಲ್ಲಿ ಧರ್ಮಸ್ಥಳದಲ್ಲಿ ನಿರಂತರವಾಗಿ ನಡೆಯುತ್ತಿದೆ ಎಂದರು.
ಧರ್ಮಸ್ಥಳದಲ್ಲಿ ಮಂಜುನಾಥ ದೇವರ ದರ್ಶನಕ್ಕೆ ಬರುವ ಭಕ್ತರಿಗಾಗಿ ಕ್ಯೂ ಕಾಂಪ್ಲೆಕ್ಸ್ ಮಾಡಿದ್ದಾರೆ. ಲಕ್ಷಾಂತರ ಜನರು ಧರ್ಮಸ್ಥಳಕ್ಕೆ ಆಗಮಿಸುತ್ತಿರುತ್ತಾರೆ. ಭಕ್ತರು ನಿಲ್ಲುವುದಕ್ಕಾಗಿ ಕ್ಯೂ ಕಾಂಪ್ಲೆಕ್ಸ್ ಮಾಡಲಾಗಿದೆ. ಇದು ಕೇವಲ ಕಟ್ಟಡ ಮಾತ್ರ ಅಲ್ಲ, ವೈದ್ಯಕೀಯ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒಳಗೊಂಡ ಕೇಂದ್ರ. ಎಲ್ಲ ಜನರಿಗೆ ಒಂದೇ ಕಡೆ ನಿಲ್ಲುವ ವ್ಯವಸ್ಥೆ ಮಾಡಿದ್ದು ಸಮಾನತೆಯನ್ನು ತೋರಿಸುತ್ತದೆ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನ್‌ಕರ್ ಮುಕ್ತ ಕಂಠದಿಂದ ಶ್ಲಾಘಿಸಿದರು.
ಭಕ್ತರ ಅನುಕೂಲಕ್ಕೆ ಕ್ಯೂ ಕಾಂಪ್ಲೆಕ್ಸ್, ಗ್ರಾಮೀಣ ಶಿಕ್ಷಣಕ್ಕೆ ಜ್ಞಾನದೀಪ: ಡಾ.ಹೆಗ್ಗಡೆ
ಸಮಾರಂಭದ ಅಧ್ಯಕ್ಷ ಸ್ಥಾನದಿಂದ ಡಾ.ವೀರೇಂದ್ರ ಹೆಗ್ಗಡೆ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ 800 ವರ್ಷಗಳ ಇತಿಹಾಸ ಹೊಂದಿದೆ. ಅನ್ನದಾನ, ವಿದ್ಯಾದಾನ, ಔ,ಧದಾನ ಹಾಗೂ ಅಭಯದಾನವೇ ಮೊದಲಾದ ನಾಲ್ಕು ವಿಧದ ದಾನಗಳಿಗೆ ಪ್ರಸಿದ್ಧಿ ಪಡೆದಿದೆ. ಪ್ರತಿಯೊಬ್ಬ ಭಕ್ತರನ್ನು ದೇರವಂತೆ ಕಾಣಲಾಗುತ್ತಿದೆ. ದೇವರು ಸರತಿ ಸಾಲಿನಲ್ಲಿ ಕಾಯುವ ಅವಧಿಯಲ್ಲಿ ಭಕ್ತರಿಗೆ ಇನ್ನೂ ಹೆಚ್ಚಿನ ಸುಧಾರಿತ ಸೌಲಭ್ಯಗಳನ್ನು ಒದಗಿಸುವ ದೃಷ್ಟಿಯಿಂದ ಈ ವಿಶೇಷ ವೈಶಿಷ್ಟ್ಯಗಳೊಂದಿಗೆ ಹೊಸ ಸರತಿ ಸಾಲಿನ ಸಂಕೀರ್ಣ ‘ಶ್ರೀ ಸಾನ್ನಿಧ್ಯ’ ನಿರ್ಮಿಸಲಾಗಿದೆ.
ನೂತನ ಸರತಿ ಸಾಲಿನ ಸಂಕೀರ್ಣದ ವಿಸ್ತೀರ್ಣ 2.75.177 ಚದರ ಅಡಿ ಆಗಿದ್ದು ಇದು ವೃತ್ತಾಕಾರದಲ್ಲಿದೆ. 16 ಸಭಾಂಗಣಗಳೊಂದಿಗೆ ಎರಡು ಅಂತಸ್ತಿನ ರಚನೆಯಾಗಿದೆ. ಪ್ರತಿ ಸಭಾಂಗಣದಲ್ಲಿ 600 ರಿಂದ 800 ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಏಕಕಾಲಕ್ಕೆ ಒಟ್ಟು 10,000-12,000 ಜನರಿಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಸಂಕೀರ್ಣವು ವಿಶಾಲವಾದ ಸಭಾಂಗಣಗಳನ್ನು ಹೊಂದಿದ್ದು, ಭಕ್ತಾದಿಗಳು ಉದ್ದನೆಯ ಸಾಲುಗಳಲ್ಲಿ ನಿಲ್ಲುವ ಬದಲು ಆರಾಮವಾಗಿ ಕಾಯಬಹುದು. ಪ್ರತಿ ಸಭಾಂಗಣವು ಪ್ರವೇಶ, ನಿರ್ಗಮನ ಮತ್ತು ತುರ್ತುನಿರ್ಗಮನ ದ್ವಾರಗಳು, ಕುಡಿಯುವ ನೀರು. ಶೌಚಾಲಯ ಸೌಲಭ್ಯಗಳು, ಶಿಶುಪಾಲನಾ ಕೊಠಡಿ ಮತ್ತು ಕೆಫೆಟೇರಿಯಾ ಸೌಲಭ್ಯಗಳನ್ನು ಹೊಂದಿದೆ. ಆಧ್ಯಾತ್ಮಿಕ ಮತ್ತು ಇತರ ವಿಷಯಗಳ ಬಗ್ಗೆ ಡಿಜಿಟಲ್ ಟಿ.ವಿ.ಗಳ ಮೂಲಕ ಮಾಹಿತಿ. ಮಾರ್ಗದರ್ಶನಗಳನ್ನು ನೀಡಲಾಗುತ್ತದೆ. ಕ್ಯೂ ಕಾಂಪ್ಲೆಕ್ಸ್‌ನ ಕಾರ್ಯಾಚರಣೆಯು ಸುಧಾರಿತ ತಂತ್ರಜ್ಞಾನದೊಂದಿಗೆ ಸಂಯೋಜಿಸಲ್ಪಟಿದ್ದು, ಪ್ರತಿ ಹಂತದಲ್ಲೂ ದಕ್ಷತೆ ಮತ್ತು ನಾವೀನ್ಯತೆಯನ್ನು ಕಾಣಬಹುದಾಗಿದೆ. ಸಂಪೂರ್ಣ ತಂತ್ರಜ್ಞಾನ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ ಎಂದರು.
ಸಮುದಾಯ ಅಭಿವೃದ್ಧಿಗೆ ಜ್ಞಾನದೀಪ:
ಇದೇ ಸಂದರ್ಭ ಗ್ರಾಮೀಣ ಶಿಕ್ಷಣವನ್ನು ಬಲಪಡಿಸುವುದು ಗ್ರಾಮೀಣ ಅಭಿವೃದ್ಧಿಯ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಅದರಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸರ್ಕಾರಿ ಶಾಲೆಗಳ ಮೂಲಕ ಗುಣಮಟ್ಟದ ಗ್ರಾಮೀಣ ಶಿಕ್ಷಣವನ್ನು ನೀಡಲು ಪ್ರಯತ್ನಗಳನ್ನು ಮಾಡುತ್ತಿವೆ. ನಾನಾ ಕಾರಣಗಳಿಂದ ಇಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಶಿಕ್ಷಕರ ಕೊರತೆ, ಮೂಲಭೂತ ಸೌಕರ್ಯಗಳ ಕೊರತೆ, ಆಟದ ಮೈದಾನಗಳು, ಶೌಚಾಲಯಗಳು ಮತ್ತು ಇತರ- ಸೌಲಭ್ಯಗಳ ಕೊರತೆ ಇರುವುದನ್ನು ಗಮನಿಸಿ, ಕರ್ನಾಟಕ ರಾಜ್ಯದಲ್ಲಿ ಗ್ರಾಮೀಣ ಶಿಕ್ಷಣವನ್ನು ಬಲಪಡಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಮೂಲಕ ಜ್ಞಾನದೀಪ ಶಿಕ್ಷಣ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಈ ಕಾರ್ಯಕ್ರಮದಡಿಯಲ್ಲಿ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.
ಪ್ರಸ್ತುತ ಸಾಲಿನಲ್ಲಿ ನಮ್ಮ ಸ್ವಸಹಾಯ ಗುಂಪುಗಳ ಸದಸ್ಯರ ಮಕ್ಕಳ ಪೈಕಿ ಸುಮಾರು 65,000 ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾಸಿಕ ವಿದ್ಯಾರ್ಥಿವೇತನವನ್ನು ನೀಡಲು ಬಜೆಟ್ ನಿಗದಿಪಡಿಸಲಾಗಿದೆ.
ಗ್ರಾಮೀಣ ಶಾಲೆಗಳಿಗೆ 1,028 ಶಿಕ್ಷಕರನ್ನು ನೇಮಿಸಲಾಗಿದೆ. ಇದುವರೆಗೆ 9.278 ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಗ್ರಾಮೀಣ ಶಾಲೆಗಳಿಗೆ 4,000 ಬೆಂಚ್-ಡೆಸ್ಟ್‌ಗಳ ವಿತರಣೆಯನ್ನು ಮಾಡಲಾಗಿದೆ ಇದುವರೆಗೆ 71,454 ಜೊತೆ ಬೆಂಚ್-ಡೆಸ್ಟ್‌ಗಳನ್ನು ವಿತರಿಸಲಾಗಿದೆ. ಪೀಠೋಪಕರಣಗಳ ಕೊರತೆ ಇರುತ ಪ್ರತೀ ಶಾಲೆಗೆ 8-10 ಜೊತೆ ಬೆಂಚ್ ಡೆಸ್ಕ್ಗಳನ್ನು ಒದಗಿಸಲಾಗುತ್ತಿದೆ ಎಂದರು.
ಇದುವರೆಗೆ 6,821 ಪ್ರಾಥಮಿಕ ಶಾಲೆಗಳು, 1,019 ಅಂಗನವಾಡಿಗಳು/ಬಾಲವಾಡಿಗಳು, 4,982 ಆಟ ಮೈದಾನಗಳು, 787 ಶೌಚಾಲಯಗಳು ಇತ್ಯಾದಿಗಳ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಲಾಗಿದೆ.
ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಮಕ್ಕಳ ಶಿಕ್ಷಣದ ಮಹತ್ವ ಬಗ್ಗೆ ಮಾಹಿತಿ, ಮಾರ್ಗದರ್ಶನ ನೀಡಲಾಗುತ್ತದೆ ಹಾಗೂ ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಂತೆ ನೋಡಿಕೊಳ್ಳಲಾಗುತ್ತದೆ ಎಂದರು.