ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನೂತನ ಅಧ್ಯಕ್ಷರಾಗಿ ರವಿರಾಜ ಹೆಗ್ಡೆ ಆಯ್ಕೆ

ಮಂಗಳೂರು

news-details

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೈನುಗಾರರ ಪ್ರತಿಷ್ಠಿತ ಸಹಕಾರಿ ಸಂಸ್ಥೆ, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನೂತನ ಅಧ್ಯಕ್ಷರಾಗಿ ಡಾ.ಎಂ. ಎನ್. ರಾಜೇಂದ್ರಕುಮಾರ್ ನೇತೃತ್ವದ ಹೈನುಗಾರರ ಬಳಗದ ರವಿರಾಜ ಹೆಗ್ಡೆ, ಹಾಗೂ ಉಪಾಧ್ಯಕ್ಷರಾಗಿ ಉದಯ ಎಸ್. ಕೋಟ್ಯಾನ್ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯ ಪೂರ್ವದಲ್ಲಿ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರು ತನ್ನ ಬಳಗದ 13 ಮಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಅವಿರೋಧ ಆಯ್ಕೆಗೆ ಕಾರಣರಾದರು. ರವಿರಾಜ್ ಹೆಗ್ಡೆಯವರು ಹಿರಿಯ ಸಹಕಾರಿಯಾಗಿದ್ದು ಈ ಹಿಂದೆಯೂ ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಅನುಭವ ಹೊಂದಿದವರು. ಉದಯ ಎಸ್. ಕೋಟ್ಯಾನ್ ಮೊದಲ ಬಾರಿಗೆ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.

ಆಯ್ಕೆಗೊಂಡಿರುವ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಡಾ. ಎಂ. ಎನ್. ರಾಜೇಂದ್ರಕುಮಾರ್ ಅವರು ಎಸ್ ಸಿಡಿಸಿಸಿ ಬ್ಯಾಂಕ್ ನಲ್ಲಿ ಮಂಗಳವಾರ ಅಭಿನಂದಿಸಿದರು. ನೂತನವಾಗಿ ಆಯ್ಕೆಗೊಂಡ ಹಾಲು ಒಕ್ಕೂಟದ ಆಡಳಿತ ಮಂಡಳಿ ಮುಖ್ಯವಾಗಿ ಹೈನುಗಾರರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಿ, ವ್ಯವಹಾರದಲ್ಲೂ ಇನ್ನಷ್ಟು ಪ್ರಗತಿಯನ್ನು ಕಾಣಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಡಾ. ಎಂ. ಎನ್. ರಾಜೇಂದ್ರ ಕುಮಾರ್ ನೇತೃತ್ವದ ಹೈನುಗಾರ ಬಳಗದಿಂದ ಸ್ಪರ್ಧಿಸಿ ಹಾಲು ಒಕ್ಕೂಟದ ನಿರ್ದೇಶಕರಾಗಿ ಆಯ್ಕೆಗೊಂಡಿದ್ದ ದೇವಿಪ್ರಸಾದ್ ಶೆಟ್ಟಿ, ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಸುಧಾಕರ್ ಶೆಟ್ಟಿ, ಎನ್. ಮಂಜಯ್ಯ ಶೆಟ್ಟಿ, ಕೆ. ಶಿವಮೂರ್ತಿ, ಸುಚರಿತ ಶೆಟ್ಟಿ, ನಂದರಾಮ್ ರೈ, ಎಸ್. ಬಿ. ಜಯರಾಮ ರೈ, ಚಂದ್ರಶೇಖರ ರಾವ್, ಎಚ್. ಪ್ರಭಾಕರ್, ಮಮತಾ ಆರ್. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಎಸ್ ಸಿ ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷರಾದ ವಿನಯಕುಮಾರ್ ಸೂರಿಂಜೆ, ನಿರ್ದೆಶಕರುಗಳಾದ ಶಶಿಕುಮಾರ್ ರೈ ಬಾಲ್ಯೋಟ್ಟು, ಮಹೇಶ್ ಹೆಗ್ಡೆ ಎಂ, ಅಶೋಕ್ ಕುಮಾರ್ ಶೆಟ್ಟಿ ಹಾಗೂ ಉದ್ಯಮಿ ಜಯಪ್ರಕಾಶ್ ತುಂಬೆ ಮೊದಲಾದವರು ಉಪಸ್ಥಿತರಿದ್ದರು.

news-details