ಪುಣೆಯಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯನ್ನು ಭಾರತ ವಶಪಡಿಸಿಕೊಂಡಿದೆ.
ಇಂಗ್ಲೆಂಡ್ ಪರ ಅಮೋಘ ಬ್ಯಾಟಿಂಗ್ ಮಾಡಿದ ಬೆನ್ ಡಕ್ಕೆಟ್ (39) ಮತ್ತು ಹ್ಯಾರಿ ಬ್ರೂಕ್ರ ಆಕರ್ಷಕ ಅರ್ಧಶತಕ (51) ಕಡೆಗೂ ಫಲಿಸಲಿಲ್ಲ.
ಟೀಮ್ ಇಂಡಿಯಾ ವಿರುದ್ಧದ ಗೆಲುವಿಗೆ ಇಬ್ಬರ ಕೊಡುಗೆಯೂ ಫಲ ನೀಡದೆ ಹೋಗಿದ್ದು, ಇಂಗ್ಲೆಂಡ್ ಅಭಿಮಾನಿಗಳ ಭಾರೀ ನಿರಾಸೆಗೆ ಕಾರಣವಾಯಿತು.
ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಈ ವೇಳೆ ಬ್ಯಾಟಿಂಗ್ ಮಾಡಿದ ಭಾರತ, 20 ಓವರ್ನಲ್ಲಿ 9 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಲು ಶಕ್ತವಾಯಿತು. ಭಾರತ ನೀಡಿದ 182 ರನ್ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಬ್ಯಾಟರ್ಗಳು ಮೊದಲ ಹತ್ತು ಓವರ್ನಲ್ಲೇ ಮೂರು ವಿಕೆಟ್ಗಳನ್ನು ಕಳೆದುಕೊಂಡಿತು. ಆರಂಭಿಕ ಹಂತದಲ್ಲೇ ಸ್ಟಾರ್ ಬ್ಯಾಟರ್ಗಳ ವಿಕೆಟ್ ಉರುಳಿದ್ದು, ಇಂಗ್ಲೆಂಡ್ಗೆ ಕಂಟಕವಾಯಿತು.
ಭಾರತದ ಪರ ಅಬ್ಬರದ ಬ್ಯಾಟಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ (53) ಮತ್ತು ಶಿವಂ ದುಬೆ (53*) ಆಕರ್ಷಕ ಅರ್ಧಶತಕ ಟೀಮ್ ಇಂಡಿಯಾ ಗೆಲುವಿಗೆ ಪ್ರಮುಖ ಕಾರಣವಾಯಿತು. ಇನ್ನು ಭಾರತ ನೀಡಿದ ಗುರಿಯನ್ನು ಚೇಸ್ ಮಾಡಿದ ಇಂಗ್ಲೆಂಡ್ ಬ್ಯಾಟರ್ಗಳನ್ನು ಬೆಂಬಿಡದೆ ಕಾಡಿದ ರವಿ ಬಿಷ್ಣೋಯಿ, ಹರ್ಷಿತ್ ರಾಣ ತಲಾ ಮೂರು ವಿಕೆಟ್ಗಳನ್ನು ಪಡೆದರೆ, ವರುಣ್ ಚಕ್ರವರ್ತಿ 2 ವಿಕೆಟ್ ಪಡೆದು, ಟೀಮ್ ಇಂಡಿಯಾ ಪರ ಮಿಂಚಿದರು. ನಾಲ್ಕನೇ ಟಿ20 ಪಂದ್ಯವನ್ನೂ ಗೆದ್ದ ಭಾರತ, 3-1 ಅಂತರದಲ್ಲಿ ಇಂಗ್ಲೆಂಡ್ ವಿರುದ್ಧ ಸರಣಿ ವಶಪಡಿಸಿಕೊಂಡಿದೆ.