<p>ಮಂಗಳೂರು ಉತ್ತರದ ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ಮುಮ್ತಾಜ್ ಆಲಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಹನಿಟ್ರ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಲ್ಲಿ ಪ್ರಮುಖ ಆರೋಪಿಯಾಗಿದ್ದ ರೆಹಮತ್ ಹಾಗೂ ಆಕೆಯ ಪತಿ ಶೋಯೆಬ್ ಎಂಬವರನ್ನು ನಿನ್ನೆ ಬಂಧಿಸಲಾಗಿತ್ತು. ಇದೀಗ ಉಳಿದ ಆರೋಪಿಗಳಾದ ಅಬ್ದುಲ್ ಸತ್ತಾರ್ , ಮುಸ್ತಾಫಾ ಮತ್ತು ಶಾಫಿ ಎಂಬವರನ್ನು ಸಿಸಿಬಿ ಪೊಲೀಸರು ಬಂಧಿಸಿ ಕಾವೂರು ಪೊಲೀಸ್ ಠಾಣೆಗೆ ಹಾಜುರಪಡಿಸಿದ್ದಾರೆ. ಮುಮ್ತಾಜ್ ಆಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುದ್ದಿ ಗೊತ್ತಾದ ಬಳಿಕ ಎಲ್ಲಾ ಆರೋಪಿಗಳು ಪರಾರಿಯಾಗಿದ್ದರು. ರೆಹಮತ್ ಹಾಗೂ ಶೋಯೆಬ್ ನಿನ್ನೆ ಬಂಟ್ವಾಳದ ಮೆಲ್ಕಾರಿನಲ್ಲಿ ಬಂಧನವಾಗಿತ್ತು. ಇಂದು ಬಂಧನವಾಗಿರುವ ಆರೋಪಿಗಳು ಮುಂಬೈಗೆ ಪರಾರಿಯಾಗಲು ಸಂಚು ರೂಪಿಸಿದ್ದು , ಬೆಳಗಾವಿಯಲ್ಲಿ ಅಡಗಿಕೊಂಡಿದ್ದರು. ಖಚಿತ ಮಾಹಿತಿ ಮೆರೆಗೆ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.</p>